ಪ್ರತಿ ದಿನವೂ ಒಂದು ಪುಟವನ್ನಾದರೂ ಬರೆಯಬೇಕೆಂದುಕೊಂಡವನಿಗೆ ಆ ಮಾತನ್ನು ಉಳಿಸಿಕೊಳ್ಳಲು ಆಗಿಲ್ಲ.
(ಪುಸ್ತಕದ ಬಗ್ಗೆ ಬರೆಯಬೇಕೆಂದು ಹೊರಟವನು ತನ್ನ ಬಗ್ಗೆ ಬರೆಯುವುದು ಓದುವವರಿಗೆ ಬೇಜಾರಾಗಬಹುದು ಎಂದು ಸಹ ಒಮ್ಮೆ ಅನ್ನಿಸುತ್ತಿದೆ.)
ಅಮಿತ್ ರೇ ಬಬ್ಬ ಬ್ಯಾರಿಸ್ಟರ್. ಜೀವನದ ಬಗ್ಗೆ ಯಾವಾಗಲೂ ಸೀರಿಯಸ್ ಅಗಿ ಇರಲಾರದವನು. ಅವನಿಗೆ ಗಂಭೀರವಾದ ಹುಡುಗಿಯೊಬ್ಬಳು ಭೇಟಿಯಾಗುತ್ತಾಳೆ. ಯಾವುದರ ಬಗ್ಗೆಯೂ ಲೆಕ್ಕ ಇಡದ ಇವನಿಗೆ, ಎಲ್ಲದರ ಬಗ್ಗೆ ಲೆಕ್ಕ ಇಡುವ ಲಾವಣ್ಯಳ ಸ್ನೇಹ ಇಷ್ಟವಾಗತೊಡಗುತ್ತದೆ.
ಅನೇಕ ಹುಡುಗಿಯರೊಂದಿಗೆ ಸಂಬಂಧ ಬೆಳೆಸಿ ಯಾವುದಕ್ಕೂ ಕಮಿಟ್ ಆಗದವನಿಗೆ, ಇದೊಂದು ಬೇಡವೆಂದರೂ ಬಿಡದ ಸಂಬಂಧವಾಗಿಬಿಡುತ್ತದೆ. ತನ್ನ ಸ್ವಭಾವಕ್ಕೆ ವಿರುದ್ಧವಾಗಿ ತಾನೇ ನಡೆದುಕೊಳ್ಳುತ್ತಿರುವುದು ಅವನಿಗೆ ಅಚ್ಚರಿ ಹುಟ್ಟಿಸುತ್ತದೆ.
ಕೊನೆಗೆ ಅವರಿಬ್ಬರಿಗೂ ಅನ್ನಿಸುವುದು ಇಷ್ಟು. 'ತುಂಬ ಸ್ವತಂತ್ರ ಸ್ವಭಾವದ ತನಗೆ ಇದಕ್ಕಿಂತ ಸರಿಯಾದ ಜೋಡಿ ಸಿಗದು'.
ಅವರು ಭಯಂಕರವಾಗಿ ಪ್ರೀತಿಸುತ್ತಾರೆ. ಕ್ಷಣಕಾಲ ಬಿಟ್ಟಿದ್ದರೆ ಜೀವ ಹೋಗಿ ಬಿಡುತ್ತದೇನೋ ಎನ್ನುವಷ್ಟು.
ಅಮಿತ್ ಲಾವಣ್ಯಳ ಮನೆಯವರ ಅನುಮತಿ ಪಡೆದು ಮದುವೆಗೆ ತಯಾರಿ ನಡೆಸುತ್ತಾನೆ.
ಇದಕ್ಕೆ ಎರಡೂ ಮನೆಯವರ ಅನುಮತಿಯೂ ದೊರಕುತ್ತದೆ.
ಆದರೆ ಅವರು ಮದುವೆಯಾಗುವುದಿಲ್ಲ.
ಯಾಕೆ? ಓದುಗನೆದುರಿಗೆ ಈ ಪ್ರಶ್ನೆ ಧುತ್ತೆಂದು ಎದುರಾಗುತ್ತದೆ.
ಕಾದಂಬರಿಯುದ್ದಕ್ಕೂ ತಾನೊಂದು ಪಾತ್ರವಾಗಿ ಬಿಡುವ ಲೇಖಕ ಈ ಪ್ರಶ್ನೆಗೆ ನೇರವಾದ ಉತ್ತರ ನೀಡುವುದಿಲ್ಲ.
ಈ ಉತ್ತರಕ್ಕೆ ಅನೇಕ ಆಯಾಮಗಳಿವೆ. ಅವು ಈ ಕಾದಂಬರಿ ಓದುವುದನ್ನು ಮುಗಿಸಿದ ನಂತರವೂ ಓದುಗನನ್ನು ಕಾಡುವುದು ನಿಲ್ಲಿಸುವುದಿಲ್ಲ.
ಕಾದಂಬರಿಯ ಪಾತ್ರಗಳು ನಾವು, ನೀವೆಲ್ಲ ಎಲ್ಲೊ ನೋಡಿದವರಾಗಿ, ಎಂಜಿ ರೋಡಿನಲ್ಲಿ, ದೊಡ್ಡ ಮಾಲಿನ್ನಲಿ, ಟ್ರಾಫಿಕ್ ಸಿಗ್ಲಲ್ಲಿನಲ್ಲಿ, ಹೆಸರಿಲ್ಲದ ಬ್ಲಾಗಿನ್ನಲ್ಲಿ ನಮಗೆ ಸಿಕ್ಕವರಾಗಿ, ಚಿಂತೆಗೆ ಹಚ್ಚುತ್ತಾರೆ, ಜೀವ ಹಿಂಡುತ್ತಾರೆ.
ನಾನು ಈ ಕಾದಂಬರಿಯನ್ನು ಕಳೆದ ಹತ್ತು ವರ್ಷದಲ್ಲಿ ಕನಿಷ್ಟ ಹತ್ತು ಬಾರಿಯಾದರೂ ಓದಿದ್ದೇನೆ. ಅಷ್ಟೇ ಸಾರಿ `ಇದು ಹಿಂಗ್ಯಾಕಾತು' ಅಂತ ವಿಚಾರ ಮಾಡಿದ್ದೇನೆ.
ಈಗ `ನಾನ್ಯಾಕೆ ಒಬ್ಬನೇ ಒದ್ದಾಡಲಿ' ಎಂದು ಈ ಕೆಲಸ ಕ್ಕೆ ಕೈ ಹಾಕಿದ್ದೇನೆ.
ಇನ್ನೊಂದು.
ಅಮೇರಿಕದ ಚಿತ್ರನಟ ಪಾಲ್ ನ್ಯೂಮನ್ ಸತ್ತು ಹೋದಾಗಲೇ ಅವನ ಬಗ್ಗೆ ಬರೆಯಬೇಕೆಂದುಕೊಂಡವನು ಸೋಮಾರಿತನದಿಂದ ಬಿಟ್ಟೆ.
ನಿನ್ನೆ ರಾತ್ರಿ ಅಲ್ಫ್ರೆಡ್ ಹಿಚ್ಕಾಕ್ ನ ಟೋರ್ನ ಕರ್ಟನ್ ನೋಡಿ ಬರೆಯಲೇಬೇಕೆನ್ನಿಸಿತು. ಶುರು ಮಾಡುತ್ತೇನೆ.
ಮೊನ್ನೆ ಸಿಕ್ಕಿದ ಕೆಂಡಸಂಪಿಗೆ ರಷೀದ್ ಅವರು, ಎನಾದರೂ ಬರೆಯಿರಿ ಎಂದರು. ಇದಾದರೂ ನನಗೆ ಬರೆಯಲು ಹಚ್ಚಲಿ.